ಫಿನಿಷ್ ಜಾನಪದ _ 
ಫಿನ್ಲೆಂಡ್ ವಿಶ್ವದ ಜಾನಪದ ಕ್ಷೇತ್ರದಲ್ಲಿ ಕಳೆದ ಮೂರು ಶತಮಾನಗಳ ಸಮೃದ್ಧವಾದ ಜಾನಪದ ಸಂಗ್ರಹ ಹಾಗೂ ಅದರ ವೈಜ್ಞಾನಿಕ ಅಧ್ಯಯನದಿಂದಾಗಿ ವಿಶಿಷ್ಟ ಸ್ಥಾನ ಗಳಿಸಿಕೊಂಡಿದೆ. 1702ರಲ್ಲಿ ಎಚ್. ಫ್ಲೋರಿನಸ್ ಎಂಬ ಪಾದ್ರಿ ಸಂಗ್ರಹಿಸಿದ ಗಾದೆಗಳ ಸಂಗ್ರಹವೇ ಫಿನಿಷ್ ಜಾನಪದದ ಆದ್ಯ ಸಂಕಲನ. 1733ರಲ್ಲಿ ಜಿ. ಮ್ಯಾಕ್ಸೆನಿಯಸ್ ಐದು ಮಾಂತ್ರಿಕಗೀತೆಗಳನ್ನೂ ಎಚ್. ಜಿ. ಪೋರ್ಥಾನ್ (1939-1804) 1766ರಿಂದ 1778ರವರೆಗೆ ಐದು ಸಂಪುಟಗಳಲ್ಲಿ ಡಿ. ಪೊಯಿಸಿ ಫೆನ್ನಿಕ ಎಂಬ ಕೃತಿಯನ್ನೂ ಒಂದು ಜನಪದ ನಾಟಕಗಳ ಸಂಕಲನಗಳನ್ನೂ ಪ್ರಕಟಿಸಿದರು. 1789ರಲ್ಲಿ ಕ್ರಿಶ್ಚಿಯನ್ ಗೆನಾಂಡರ್ ಅವರು ಮೈಥಾಲಜಿಯ ಫೆನ್ನಿಕ ಎಂಬ ಕೃತಿಯನ್ನು ಪ್ರಕಟಿಸಿದ. ಈತ ಫಿನಿಷ್ ಜಾನಪದದಲ್ಲಿ ಮೊದಲ ಬಾರಿಗೆ ಪ್ರಾಣಿಕಥೆಗಳನ್ನೂ ಒಗಟುಗಳನ್ನೂ ಸಂಗ್ರಹಿಸಿದ. ಜೆಡ್ ಟೊಪೇಲಿಯಸ್ ಎಂಬ ವೈದ್ಯ 1822-31ರ ಅವಧಿಯಲ್ಲಿ ಜನಪದ ಗೀತೆಗಳ ಸಂಕಲನವನ್ನು ಐದು ಸಂಪುಟಗಳಲ್ಲಿ ಪ್ರಕಟಿಸಿದ. 1889ರಲ್ಲಿ ಆರ್. ಹಟ್ರ್ಸ್‍ಬರ್ಗ್ 17ನೆಯ ಶತಮಾನದ ನ್ಯಾಯಾಲಯದ ದಾಖಲೆಗಳಲ್ಲಿ ದೊರೆತ ಮಾಂತ್ರಿಕ ಹಾಡುಗಳನ್ನು ಪ್ರಕಟಿಸಿದೆ. ಇವೆಲ್ಲ ವ್ಯೆಯಕ್ತಿಕ ಪ್ರಯತ್ನಗಳು.

ಫಿನಿಷ್ ಜಾನಪದದ ಇತಿಹಾಸದಲ್ಲಿ ಫಿನಿಷ್ ಲಿಟರರಿ ಸೊಸೈಟಿಯ ಸ್ಥಾಪನೆ ಬಹುಮುಖ್ಯವಾದ ಘಟ್ಟ. ಫಿನಿಷ್ ಭಾಷೆಗೆ ಸೂಕ್ತವಾದ ಸ್ಥಾನಮಾನಗಳನ್ನು ತಂದು ಕೊಟ್ಟು. ಅದನ್ನು ಉಳಿಸಿ ಬೆಳೆಸಿ, ತಮ್ಮ ರಾಷ್ಟ್ರೀಯ ಭಾಷೆಯನ್ನಾಗಿ ರೂಪಿಸುವ ಸಲುವಾಗಿ ವಿಶ್ವವಿದ್ಯಾಲಯದ ಕೆಲವು ಅಧ್ಯಾಪಕರು 1831ರಲ್ಲಿ ಈ ಸಂಸ್ಥೆಯನ್ನು ಆರಂಭಿಸಿದರು. ಈ ಸಂಸ್ಥೆ ಭಾಷೆ ಮತ್ತು ಸಾಹಿತ್ಯಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದರೂ ಇದರ ಮುಖ್ಯವಾದ ಸಾಧನೆ ಜಾನಪದ ಸಂಗ್ರಹ, ಸಂಪಾದನೆ ಮತ್ತು ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು. ಈ ದೃಷ್ಟಿಯಿಂದ ಈ ಸಂಸ್ಥೆಯನ್ನು ಜಗತ್ತಿನ ಮೊತ್ತಮೊದಲ ಜಾನಪದ ಅಧ್ಯಯನ ಸಂಸ್ಥೆ ಎಂದು ಕರೆಯಬಹುದು. ಈ ಸಂಸ್ಥೆಯ ಹಲವಾರು ಯೋಜನೆಗಳಲ್ಲಿ ಕಾಲೇವಾಲಾ ಮಹಾಕಾವ್ಯದ ಸಂಗ್ರಹ, ಸಂಪಾದನೆ ಮತ್ತು ಪ್ರಕಟಣೆ ಪ್ರಮುಖವಾದುದು. ಈ ಮಹಾಕಾವ್ಯದ ಮೊದಲ ಆವೃತ್ತಿ ಲೋನ್ರಾಟ್ ಎಲಿಯಾಸ್ ಎಂಬ ವಿದ್ವಾಂಸನ ಸಂಪಾದಕತ್ವದಲ್ಲಿ 1835ರಲ್ಲಿಯೂ ಇದರ ವಿಸ್ತøತ ಆವೃತ್ತಿ 1849 ರಲ್ಲಿಯೂ ಪ್ರಕಟವಾಯಿತು. ರಷ್ಯದ ಪ್ರಭುತ್ವ ಈ ಸಂಸ್ಥೆಯ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿದರೂ ಜಾನಪದ ಸಂಬಂಧಿ ಚಟುವಟಿಕೆಗಳು ಕುಂಠಿತಗೊಳ್ಳಲಿಲ್ಲ. 1852ರಿಂದ 1866 ರವರೆಗೆ ಈರೋಸಾಲ್ಮೆನೈನೆನ್ ಸಂಗ್ರಹಿಸಿದ್ದ ಫಿನ್ಲೆಂಡಿನ ಜನಪದ ಕಥೆಗಳನ್ನು ಈ ಸಂಸ್ಥೆ ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿತು. 19ನೆಯ ಶತಮಾನದ ಕಡೆಯ ವೇಳೆಗೆ ಈ ಸಂಸ್ಥೆಗೆ ಸರ್ಕಾರದ ಮಾನ್ಯತೆ, ಸಹಾಯಧನ ದೊರೆತುದುದಲ್ಲದೆ ಸ್ವಂತ ಕಟ್ಟಡ, ದೊಡ್ಡ ಪುಸ್ತಕಭಂಡಾರ ಇವೆಲ್ಲವೂ ದೊರೆತು, ಜಾನಪದದ ಸಂಶೋಧನೆಗಾಗಿ ಒಂದು ಪ್ರತ್ಯೇಕ ಕಮಿಷನನ್ನು ನೇಮಕ ಮಾಡಲಾಯಿತು. ಆಸ್ಪೆಲಿನ್ ತಯಾರಿಸಿದ ಯೋಜನೆಯಂತೆ ಈ ಸಂಸ್ಥೆ ಜಾನಪದದ ಎಲ್ಲಾ ಪ್ರಕಾರಗಳಲ್ಲಿಯೂ ಸಾಮಗ್ರಿಯನ್ನು ಸಂಗ್ರಹಿಸುವ ಪ್ರಯತ್ನದಲ್ಲಿ ತೊಡಗಿ ಈವರೆಗೆ ಆನೇಕ ಮಹತ್ತ್ವಪೂರ್ಣ ಗ್ರಂಥಗಳನ್ನು ಪ್ರಕಟಿಸಿದೆ. ದಿ ಓಲ್ಡ್ ರೂನೆಸ್ ಆಫ್ ದಿ ಫಿನಿಷ್ ಪೀಪಲ್ ಎಂಬ ಹೆಸರಿನಲ್ಲಿ 33 ಬೃಹತ್ ಸಂಪುಟಗಳಲ್ಲಿ ಫಿನ್ಲೆಂಡಿನ ಜನಪದ ಗೀತೆಗಳನ್ನೂ 5 ಸಂಪುಟಗಳಲ್ಲಿ ಜನಪದ ಸಂಗೀತದ ಧಾಟಿಗಳನ್ನೂ ಪ್ರಕಟಿಸಿದೆ. ಬೇಟೆಗಾರಿಕೆ, ಮೀನುಗಾರಿಕೆ, ವ್ಯವಸಾಯ, ಪಶುಪಾಲನೆ-ಈ ಕಸಬುಗಳಿಗೆ ಸಂಬಂಧಿಸಿದ ಅನೇಕ ಜನಪದ ಸಂಪ್ರದಾಯಗಳು ಹಾಗೂ ನಂಬಿಕೆಗಳನ್ನು ಒಳಗೊಂಡ ವೆರೋನೆನ್ ಸಂಗ್ರಹಿಸಿದ್ದ ದಿ ಒಲ್ಡ್ ಮ್ಯಾಜಿಕ್ ಪ್ರಾಕ್ಟೀಸಸ್ ಆಫ್ ದಿ ಫಿನ್ಸ್ ಎಂಬ ಕೃತಿಯನ್ನು ಈ ಸಂಸ್ಥೆ ಪ್ರಕಟಿಸಿದೆ. ಈ ಸಂಸ್ಥೆ 75,000 ಐತಿಹ್ಯಗಳನ್ನು ಸಂಗ್ರಹಿಸಿದ್ದು ಈ ಸಂಗ್ರಹದಿಂದ ಲೌರಿ ಸೀಮಾನ್ಸ್‍ಸುರ್ರಿ ಅವರ ಸಂಪಾದಕತ್ವದಲ್ಲಿ 900 ಐತಿಹ್ಯಗಳನ್ನೊಳಗೊಂಡ ಮಿತಿಕಲ್ ಲೆಜೆಂಡ್ಸ್ ಎಂಬ ಕೃತಿ ಪ್ರಕಟವಾಗಿದೆ. ಫಿನ್ಲೆಂಡ್ ಮತ್ತು ಸ್ವೀಡನ್ ಇವುಗಳ ಐತಿಹ್ಯಗಳ ತೌಲನಿಕ ಅಧ್ಯಯನವೂ ನಡೆದಿದೆ. ಫ್ಲೋರಿನಸ್, ಗೊಟ್ಲ್ಯಾಂಡ್, ಲೋನ್ರಾಟ್ ಎಲಿಯಾಸ್ ಆಸ್ಟೆಲಿನ್, ಫಾರ್ಸಮ್ಯಾನ್-ಇವರು ಗಾದೆಗಳ ಒಂದೊಂದು ಸಂಕಲನವನ್ನು ಪ್ರಕಟಿಸಿದ್ದಾರೆ. ಗೆನ್ಯಾಂಡರ್, ಲೋನ್ರಾಟ್ ಎಲಿಯಾಸ್, ಹಾವಿಯೊ ಮತ್ತು ಜೆ.ಔಟಲಾ- ಇವರು ಒಗಟುಗಳ ಸಂಕಲನವನ್ನು ಪ್ರಕಟಿಸಿದ್ದಾರೆ. ಈ ಸಂಸ್ಥೆ 50,000 ಒಗಟುಗಳನ್ನು ಸಂಗ್ರಹಿಸಿದೆ. ಎಂ.ಹಾವಿಯೋ ಮತ್ತು ಜೆ.ಔಟಲಾ ಅವರು ಈ ಸಂಗ್ರಹದಿಂದ 3,500 ಒಗಟುಗಳನ್ನು ಆರಿಸಿ ದಿ ಬುಕ್ ಆಫ್ ಫಿನಿಷ್ ಪಾಪ್ಯುಲರ್ ರಿಡಲ್ಸ್ ಎಂಬ ಹೆಸರಿನಲ್ಲಿ ಒಗಟುಗಳ ಒಂದು ಸಂಕಲನವನ್ನು ತಂದಿದ್ದಾರೆ. ಎ.ಎಚ್. ರೀನ್ ಹೋಮ್ ಅವರು ಆಟಗಳು ಮತ್ತು ನೃತ್ಯಗಳಿಗೆ ಸಂಬಂಧಿಸಿದಂತೆ ಒಂದು ಸಂಕಲನವನ್ನೂ ಆರ್.ಕೆ. ಜಾನಸ್ ಮತ್ತು ಎ. ಬೊರೇನಿಯಸ್ ಅವರು ಫಿನಿಷ್ ಲಿಟರರಿ ಸೊಸೈಟಿಯ ನೆರವಿನಿಂದ ಜನಪದ ಸಂಗೀತದ ಐದು ಸಂಪುಟಗಳ ಬೃಹತ್ ಗ್ರಂಥವನ್ನೂ ಪ್ರಕಟಿಸಿದ್ದಾರೆ. ಫಿನಿಷ್ ಲಿಟರರಿ ಸೊಸೈಟಿ ಈಚೆಗೆ ಐದು ಸಂಪುಟಗಳಲ್ಲಿ ಜಾನಪದ ಸಂಗೀತವನ್ನು ಪ್ರಕಟಿಸಿದೆ. ಹೆರ್ಕಿ ಮೇರಿಲೈನೆನ್, ಪೋರ್ಥಾನ್, ಲೆಂಕ್ವಿಸ್ಟ್, ಎಂ. ವರೋನೆಸ್ ಮತ್ತು ರ್ಯಾಂಟೋಸಾಲೋ ಅವರು ಜನಪದ ನಂಬಿಕೆಗಳನ್ನು ಸಂಗ್ರಹಿಸಿದ್ದಾರೆ. ಕೆ.ಎಫ್. ಕಾರ್ಜಲೈನನ್, ಕಾರ್ಲೆಕ್ರಾನ್, ವುನೋ ಹಾರ್ಪ ಮತ್ತು ಹೋಮ್‍ಬರ್ಗ್-ಇವರು ಹಲವು ಸಂಪುಟಗಳಲ್ಲಿ ರಿಲಿಜನ್ ಆಪ್ ದಿ ಫಿನಷ್ ಟ್ರೈಬ್ಸ್ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಇಷ್ಟೆ ಅಲ್ಲದೆ, ಫಿನಿಷ್ ಸೊಸೈಟಿಯಲ್ಲಿನ ಅಪ್ರಕಟಿತ ಸಾಮಗ್ರಿಯನ್ನು ಪ್ರತಿಮಾಡಿಸಿ, ವರ್ಗೀಕರಿಸಿ ತುಂಬಾ ವ್ಯವಸ್ಥಿತವಾಗಿ ಸಂರಕ್ಷಿಸಿಡಲಾಗಿದೆ. 1947ರ ವೇಳೆಗೆ ಸುಮಾರು ಎರಡು ಲಕ್ಷ ಎಪ್ಪತ್ತೈದು ಸಾವಿರ ಪುಟಗಳಷ್ಟು ಜಾನಪದ ಸಾಮಗ್ರಿಯನ್ನು ಈ ಸಂಸ್ಥೆ ಸಂಗ್ರಹಿಸಿದೆ. ಇವುಗಳಲ್ಲಿ ಎಪ್ಪತ್ತೈದು ಸಾವಿರ ಪುಟಗಳು ಪುರಾಣಗಳಿಗೂ, ಇಪ್ಪತ್ತುಸಾವಿರ ಪುಟಗಳು ಐತಿಹಾಸಿಕ ಮತ್ತು ಪ್ರಾದೇಶಿಕ ಪರಂಪರೆಗಳಿಗೂ ಹತ್ತುಸಾವಿರ ಪುಟಗಳು ವಿವರಣ್ಮಾತಕ ಐತಿಹ್ಯಗಳಿಗೂ ಇಪ್ಪತ್ತುಸಾವಿರ ಪುಟಗಳು ಜನಪದ ಸಂಗೀತಕ್ಕೂ ಒಂದು ಲಕ್ಷ ಪುಟಗಳು ಸಂಪ್ರದಾಯ ಮತ್ತು ಗಾದೆಗಳಿಗೂ ಸಂಬಂಧಪಟ್ಟಿವೆ. ಜನಪದ ಸಂಗೀತವನ್ನು ಧ್ವನಿಮುದ್ರಿಸಿಕೊಳ್ಳಲಾಗಿದೆ. ಈ ಸಂಸ್ಥೆಯ ಜಾನಪದ ಸಾಮಗ್ರಿಯ ವಿಷಯಸೂಚಿಗಳು ಪ್ರಕಟವಾಗಿವೆ. ಆಂಟಿ ಆರ್ನೆ ಜನಪದಕಥೆಗಳಿಗೆ ಸಂಬಂಧಪಟ್ಟ ಸೂಚಿಗಳನ್ನೂ ಹಾಲ್ಟ್ ಸೋನೆನ್, ಟುಂಗ್ ಶಿಲೆ ಅವರು ಜನಜೀವನಕ್ಕೆ ಸಂಬಂಧಿಸಿದ ವಿವರಗಳ ದಾಖಲೆಯ ಸೂಚಿಯನ್ನೂ ತಯಾರಿಸಿದ್ದಾರೆ. ಇದರ ಜೊತೆಗೆ ಅರವತ್ತುಸಾವಿರ ವಿಷಯಗಳನ್ನೊಳಗೊಂಡ ಹರ್ಟ್ ಮತ್ತು ಐಸನ್ ಸಂಗ್ರಹಿಸಿದ ಜಾನಪದ ಸಂಗ್ರಹವನ್ನು ಈ ಸಂಸ್ಥೆ ಉಳಿಸಿಕೊಂಡಿದೆ.
ಇಲ್ಲಿ ಜಾನಪದದ ಎಲ್ಲ ಪ್ರಕಾರಗಳಲ್ಲೂ ಸಂಗ್ರಹಕಾರ್ಯ ನಡೆದಿದೆ. ಜಗತ್ತಿನ ಇತರ ಕಡೆಗಳಲ್ಲಿರುವ ಲಾವಣಿಗಳ ಮಾದರಿಯಲ್ಲಿಯೇ ಇಲ್ಲಿನ ಲಾವಣಿಗಳು ಇವೆ. ಕಾಲೇವಾಲಾ ಮತ್ತು ವೀರಕಾವ್ಯಗಳಲ್ಲಿ ಭಾವಗೀತಾತ್ಮಕ ಸಾಹಿತ್ಯ ಲಭ್ಯವಾಗಿದೆ. ಇಲ್ಲಿನ ಮದುವೆಯ ಹಾಡುಗಳು ವಿಶಿಷ್ಟವಾದುವು. ಫಿನ್ಲೆಂಡಿನ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿದ ಸೇಂಟ್ ಹೆನ್ರಿಯ ಬಗ್ಗೆ ಸಾಕಷ್ಟು ಲಾವಣಿಗಳಿವೆ. ರಷ್ಯನರಿಂದ ಸ್ವೀಕರಿಸಿದ ಕೆಲವು ಹಾಡುಗಳನ್ನು ಫಿನ್ಲೆಂಡಿನ ಜನ ಮದುವೆ ಮತ್ತು ಸಾವು-ಈ ಎರಡು ಸಂದರ್ಭಗಳಲ್ಲಿಯೂ ಬಳಸುತ್ತಾರೆ. ಪೂರ್ವ ಮತ್ತು ಪಶ್ಚಿಮ ಯೂರೋಪಿನ ಎರಡು ಸಂಸ್ಕøತಿಗಳ ಪ್ರಭಾವಕ್ಕೂ ಫಿನ್ಲೆಂಡ್ ಒಳಗಾಗಿರುವುದರಿಂದ ಅಲ್ಲಿನ ಜನಪದ ಕಥೆಗಳಲ್ಲಿ ಸಮೃದ್ಧಿ ಹಾಗೂ ವೈವಿಧ್ಯವನ್ನು ಕಾಣಬಹುದೆಂದು ವಿದ್ವಾಂಸರು ಅಭಿಪ್ರಾಯ.
ಫಿನಿಷ್ ಜಾನಪದದ ಅತ್ಯಂತ ಮಹತ್ತ್ವಪೂರ್ಣ ಕೊಡುಗೆ ಕಾಲೇವಾಲಾ ಎಂಬ ಮಹಾಕಾವ್ಯ. 22,795 ಸಾಲುಗಳ-ಈ ಮಹಾಕಾವ್ಯದಲ್ಲಿ ಐವತ್ತು ಅಧ್ಯಾಯಗಳಿವೆ. ಫಿನ್ಲೆಂಡಿನ ವಿವಿಧ ಭಾಗಗಳಲ್ಲಿ ವಿವಿಧ ಕಾಲಗಳಲ್ಲಿ, ಅಜ್ಞಾತಕವಿಗಳಿಂದ ರಚಿತವಾಗಿ ಹಾಡುಗಾರರಿಂದ ಕಂಠಸ್ಥ ಸಂಪ್ರದಾಯದ ಮೂಲಕ ಹರಿದುಬಂದ ಈ ಹಾಡುಗಳನ್ನು ವಿಶೇಷ ಪರಿಶ್ರಮದಿಂದ ಸಂಗ್ರಹಿಸಿ, ಪರಿಷ್ಕರಿಸಿ ಮಹಾಕಾವ್ಯದ ಆಕಾರವನ್ನು ತಂದು ಕೊಟ್ಟ ಕೀರ್ತಿ ಲೋನ್ರಾಟ್ ಎಲಿಯಾಸ್ ಅವರಿಗೆ ಸಲ್ಲುತ್ತದೆ. ಸ್ವದೇಶಪ್ರೇಮವೇ ಮುಖ್ಯವಾಗಿರುವ ಈ ಕೃತಿಯಲ್ಲಿ ಫಿನ್ಲೆಂಡ್ ಕಾಲೇವಾಲಾ ಅಥವಾ ವೀರರನಾಡು ಎಂಬುದಾಗಿ ವರ್ಣಿತವಾಗಿದೆ. ಇಲ್ಲಿ ಚಿತ್ರಿತವಾಗಿರುವ ಜನಜೀವನ ಕ್ರಿ.ಶ. ಹನ್ನೆರಡನೆಯ ಶತಮಾನದ ಮೊದಲಿಗೆ ಫಿನ್ಲೆಂಡಿನಲ್ಲಿದ್ದ ಪೇಗನ್ ಸಂಸ್ಕøತಿಯ ಯುಗಕ್ಕೆ ಸೇರಿದೆಯೆಂದು ಹೇಳಲಾಗಿದೆ. ಈ ಕಾವ್ಯದ ತುಂಬ ಯುದ್ಧಗಳು, ಸಾಹಸಕಾರ್ಯಗಳು, ಮಂತ್ರಮಾಟಗಳು ಅದ್ಭುತರಮ್ಯ ಕಥೆಗಳು-ಇವನ್ನು ಬಹುವಾಗಿ ಕಾಣಬಹುದಾಗಿದೆ. ಫಿನ್ಲೆಂಡಿನ ಜನರಲ್ಲಿ ರಾಷ್ಟ್ರೀಯ ಭಾವನೆಯನ್ನು ಮೂಡಿಸಿದ ಈ ಕೃತಿಯ ಮೊದಲ ಆವೃತ್ತಿ ಪ್ರಕಟವಾದ ದಿವಸವನ್ನು ಪ್ರತಿವರ್ಷವೂ ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಗುತ್ತಿದೆ. 		(ನೋಡಿ- ಕಾಲೇವಾಲಾ)

ಫಿನ್ಲೆಂಡಿನ ಜನಪದ ವಿದ್ವಾಂಸರಲ್ಲಿ ಲೋನ್ರಾಟ್ ಎಲಿಯಾಸ್, ಜೂಲಿಯಸ್ ಕ್ರಾನ್, ಕಾರ್ಲೆಕ್ರಾನ್, ಆಂಟಿ ಆರ್ನೆ ಇವರು ಪ್ರಮುಖರು. ಕಾಲೇವಾಲದ ಸಂಪಾದಕನಾದ ಲೋನ್ರಾಟ್ ಎಲಿಯಾಸ್ (1802-1844) ವೃತ್ತಿಯಿಂದ ವೈದ್ಯ. ಆರುನೂರು ಜನಪದ ಗೀತೆಗಳ ಕಾಂಟೀಲೇಟರ್ ಎಂಬ ಸಂಕಲನ, ಏಳುಸಾವಿರ ಗಾದೆಗಳ ದಿ ಪ್ರಾವಬ್ರ್ಸ್ ಆಫ್ ಫಿನ್ಸ್ ಎಂಬ ಕೃತಿ, 1648 ಫಿನಿಷ್ ಒಗಟುಗಳು 135 ಎಸ್ತೊನಿಮನ್ ಒಗಟುಗಳ ಸಂಕಲನ ದಿ ರಿಡಲ್ಸ್ ಆಫ್ ಫಿನ್ಸ್-ಇವು ಈತನ ಇತರ ಕೃತಿಗಳು. ಫಿನಿಷ್ ಲಿಟರರಿ ಸೊಸೈಟಿಯ ಸ್ಥಾಪಕಕಾರ್ಯದರ್ಶಿಯಾಗಿ, ಹೆಲಸಿಂಕಿ ವಿಶ್ವವಿದ್ಯಾಲಯದಲ್ಲಿ ಫಿನಿಷ್ ಭಾಷಾ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ ಈತ ಜಾನಪದ ವಿದ್ವಾಂಸರ ಒಂದು ತಂಡವನ್ನೇ ರೂಪಿಸಿದ. ಹೆಲಸಿಂಕಿ ವಿಶ್ವವಿದ್ಯಾಲಯದಲ್ಲಿ ಫಿನಿಷ್ ಭಾಷೆ ಮತ್ತು ಸಾಹಿತ್ಯದ ಪ್ರಾಧ್ಯಾಪಕನಾಗಿದ್ದ ಜೂಲಿಯಸ್ ಕ್ರಾನ್ (1835-88) ದಿ ಜಿನೆಟಿಕ್ ಎಕ್ಸ್‍ಪ್ಲನೇಷನ್ ಆಫ್ ದಿ ಸಕಾಲೇವಾಲ (ಎರಡು ಸಂಪುಟಗಳು), ಇಸ್ಟೊರಿ ಆಫ್ ಫಿನಿಷ್ ಲಿಟರೇಚರ್ ಮತ್ತು ಇನ್‍ವೆಸ್ಟಿಗೇಷನ್ ಕನ್ಸಲ್ನಿಂಗ್ ದಿ ಕಾಂಟಿಲೇಟರ್ ಮೊದಲಾದ ಕೃತಿಗಳನ್ನು ರಚಿಸಿದ್ದಾನೆ. ಕಾಲೇವಾಲದ ಸಂಪಾದನೆಯಲ್ಲಿ ಐತಿಹಾಸಿಕ ಭೌಗೋಳಿಕ ಕ್ರಮವನ್ನು ಪ್ರಯೋಗಿಸಿದ್ದು ಈತನ ಸಾಧನೆ.

ಹೆಲಸಿಂಕಿ ವಿಶ್ವವಿದ್ಯಾಲಯದಲ್ಲಿ ಫಿನಿಷ್ ಮತ್ತು ತೌಲನಿಕ ಜಾನಪದದ ಪ್ರಾಧ್ಯಾಪಕನಾಗಿ ನೇಮಕಗೊಂಡ ಕಾರ್ಲೆಕ್ರಾನ್ (1863-1933) ಜಗತ್ತಿನ ವಿಶ್ವವಿದ್ಯಾಲಯಗಳಲ್ಲಿ ನೇಮಕಗೊಂಡ ಮೊತ್ತಮೊದಲ ಜಾನಪದ ಪ್ರಾಧ್ಯಾಪಕ. ಜನಪದ ಕಥೆಗಳು ಮತ್ತು ಕಾಲೇವಾಲದ ಸಂಬಂಧವಾಗಿ ಈತ ನಡೆಸಿರುವ ಮೂಲಭೂತ ಸಂಶೋಧನೆಗಳು ಮಹತ್ತ್ವದವಾಗಿದೆ. ಕಾಲೇವಾಲದ ಐತಿಹಾಸಿಕತೆಯನ್ನು ಗುರುತಿಸಿದ ಕೀರ್ತಿ ಈತನಿಗೆ ಸಲ್ಲಬೇಕು. ಈತ ಜಗತ್ತಿನ ವಿವಿಧ ಭಾಷೆಗಳ ತೌಲನಿಕ ಅಧ್ಯಯನಕ್ಕೆ ಅನುಕೂಲವಾಗುವಂತೆ ಫೋಕ್‍ಲೋರ್ ಫೆಲೋಸ್ ಎಂಬ ಅಂತರರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಿದ. ಅದರ ವತಿಯಿಂದ ತನ್ನ ಜೀವಿತದ ಅವಧಿಯಲ್ಲಿ ಒಂದುನೂರು ಗ್ರಂಥಗಳನ್ನು ಪ್ರಕಟಿಸಿದುದು ಈತನ ಅಪೂರ್ವ ಸಂಘಟನಾ ಸಾಮಥ್ರ್ಯಕ್ಕೆ ನಿದರ್ಶನವಾಗಿದೆ.

ಭೌಗೋಳಿಕ ಕ್ರಮವನ್ನು ಪರಿಷ್ಕರಿಸಿದ ಕೀರ್ತಿ ಆರ್ನೆ ಆಂಟಿ (1867-1925)ಗೆ ಸಲ್ಲುತ್ತದೆ. ಜನಪದ ಕಥೆಗಳಿಗೆ ಸಂಬಂಧಿಸಿದಂತೆ ಅನೇಕ ಗ್ರಂಥಗಳನ್ನೂ ಲೇಖನಗಳನ್ನೂ ಜನಪದ ಕಥೆಗಳ ವರ್ಗಸೂಚಿಯನ್ನೂ ಈಗ ಪ್ರಕಟಿಸಿದ್ದಾನೆ. ಈ ವರ್ಗಸೂಚಿ ಮುಂದೆ ಸ್ವಿತ್ ಥಾಮ್ಸನ್ ಅವರಿಂದ ಪರಿಷ್ಕಾರಗೊಂಡು ದಿ ಟೈಪ್ಸ್ ಆಫ್ ಫೋಕ್‍ಟೇಲ್ ಎಂಬ ಹೆಸರಿನಿಂದ ಪ್ರಕಟಿತವಾಯಿತು.

ಏಳು ಶತಮಾನಗಳ ಸ್ವೀಡಿಸ್ ಆಳ್ವಿಕೆ ಮತ್ತು ಮೂರು ದಶಕಗಳ ರಷ್ಯನ್ ಆಳ್ವಿಕೆಗೆ ಒಳಪಟ್ಟು ಸತ್ತ್ವಹೀನವಾಗಿದ್ದ ಫಿನಿಷ್ ಭಾಷೆ, ಸಾಹಿತ್ಯ ಮತ್ತು ಜೀವನಕ್ಕೆ ಹೆಚ್ಚಿನ ಸ್ವದೇಶಿ ಸತ್ತ್ವವನ್ನು ತುಂಬಿ ಫಿನ್ಲೆಂಡಿನ ಜನರನ್ನು ಒಂದುಗೂಡಿ ಅವರಲ್ಲಿ ರಾಷ್ಟ್ರೀಯ ಮನೋಭಾವನೆಯನ್ನು ಮತ್ತು ಸ್ವಾತಂತ್ರ್ಯ ಪ್ರಜ್ಞೆಯನ್ನು ಬೆಳೆಸುವಲ್ಲಿ ಇಲ್ಲಿನ ಜಾನಪದ ಕೊಡುಗೆ ಬಹು ಬೆಲೆಯುಳ್ಳದ್ದು.	
(ಟಿ.ಎನ್.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ